|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೮೧. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶ್ರೀಗಳವರು

ಶಿಷೋದ್ಧಾರಾಸಕ್ತರಾಗಿ ದಿಗ್ವಿಜಯಯಾತ್ರೆ ಹೊರಟ ಶ್ರೀಗಳವರು ಎಲ್ಲಕಡೆ ಶಿಷ್ಯ-ಭಕ್ತ ಜನೋದ್ಧಾರ, ದೀನ-ದಲಿತ ಜನರ ಕಲ್ಯಾಣವೆಸಗುತ್ತಾ ತಮ್ಮ ಮಹಿಮೆಗಳಿಂದ ಸರ್ವಜನರ ಕಾಂಕ್ಷಿತಗಳನ್ನು ಪೂರೈಸುತ್ತಾ ದಕ್ಷಿಣದೇಶದ ಸಂಚಾರ ಮುಗಿಸಿ ಇಂದಿನ ದಕ್ಷಿಣಕನ್ನಡ ಜಿಲ್ಲೆಯ ಕಡೆಗೆ ಹೊರಟು, ಸಂಚಾರಕ್ರಮದಲ್ಲಿ ಗುರುರಾಜರು ವಿಷ್ಣುಮಂಗಲಕ್ಕೆ ಬಂದರು. ಅಲ್ಲಿ ಶ್ರೀಹರಿಯನ್ನು ಆರಾಧಿಸಿ ಪರಮಾತ್ಮನ ದರ್ಶನ-ಸೇವನಾದಿಗಳಿಂದ ಸಂತುಷ್ಟರಾದ ಗುರುಗಳು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದರು. ಭಕ್ತರ ಕುಷ್ಟಾದಿರೋಗಗಳನ್ನು ಕಳೆದು ಅನುಗ್ರಹಿಸುವ ಶಿವಕುಮಾರನಾದ ಶ್ರೀಸುಬ್ರಹ್ಮಣ್ಯನನ್ನು ಭಕ್ತಿಯಿಂದ ಸೇವಿಸಿ ಅಲ್ಲಿ ಕೆಲಕಾಲ ವಾಸಮಾಡಿ ತತ್ವಧರ್ಮಪ್ರಸಾರಮಾಡುತ್ತಾ ಸಜ್ಜನರನ್ನು ಅನುಗ್ರಹಿಸಿದರು.

ರೈತಸಿದ್ಧಾಂತಕ್ಕೆ ಆಧಾರಸ್ತಂಭರಾದ, ತಪಸ್ವಿಗಳಾದ, ರಾಘವೇಂದ್ರಯತಿಪುಂಗವರು ದೈತಸಿದ್ಧಾಂತದ ಮೂಲನೆಲೆಯಾದ ಶ್ರೀಉಡುಪಿಕ್ಷೇತ್ರಕ್ಕೆ ದಯವಾಡುವ ವಿಚಾರವರಿತ ಪರ್ಯಾಯ ಪೀಠದ ಶ್ರೀಸೋದೆ ಮಠಾಧೀಶ್ವರ, ಸರ್ವಜ್ಞಸಿಂಹಾಸನಾಧೀಶ್ವರರನ್ನು ಗೌರವದಿಂದ ಸ್ವಾಗತಿಸಲು ಸಕಲ ವ್ಯವಸ್ಥೆಗಳನ್ನೂ ಮಾಡಿದರು.